ಇವಿಎಂ ಮುಟ್ಟಿದರೆ ಸಾವು-ಬದುಕಿನ ಸಮರ; ಒಂದೇ ಕರೆಗೆ ಹತ್ತು ಸಾವಿರ ಜನ ಬರ್ತಾರೆ ಎಂದು ಟಿಎಂಸಿ ಧಮ್ಕಿ! | West Bengal Elections

West Bengal Elections
West Bengal Elections
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ (West Bengal Elections) ಎರಡನೇ ಹಂತದ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ, ಇವಿಎಂ ಯಂತ್ರಗಳ ಸುರಕ್ಷತೆಯ ವಿಚಾರವಾಗಿ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಮತಯಂತ್ರಗಳಲ್ಲಿ ಅಕ್ರಮ ಅಥವಾ ದುರುಪಯೋಗ ನಡೆಯಬಹುದು ಎಂಬ ಶಂಕೆ ವ್ಯಕ್ಯಪಡಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಕ್ಷಿಣ ಕೋಲ್ಕತ್ತಾದ ಸಖಾವತ್ ಸ್ಮಾರಕ ಶಾಲೆಯಲ್ಲಿರುವ ಸ್ಟ್ರಾಂಗ್ ರೂಮ್‌ಗೆ ಹಠಾತ್ ಭೇಟಿ ನೀಡಿದರು.
ಕೋಲ್ಕತ್ತಾದಲ್ಲಿ ಸುರಿಯುತ್ತಿದ್ದ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಸಂಜೆ ಸ್ಥಳಕ್ಕೆ ಆಗಮಿಸಿದ ದೀದಿ, ಮತ ಎಣಿಕೆ ಕೇಂದ್ರದ ಒಳಗೆ ತೆರಳಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದ ಮಮತಾ ಬ್ಯಾನರ್ಜಿ, ಮತಯಂತ್ರಗಳಲ್ಲಿ ಅಕ್ರಮ ಎಸಗಲು ಅಥವಾ ಫಲಿತಾಂಶವನ್ನು ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದರೆ, ಇದನ್ನು ಸಾವು-ಬದುಕಿನ ಹೋರಾಟವಾಗಿ ಪರಿಗಣಿಸುತ್ತೇನೆ, ಹೋರಾಟವೇ ನನ್ನ ಬದುಕು ಎಂದರು. ಆರಂಭದಲ್ಲಿ ಕೇಂದ್ರ ಪಡೆಗಳು ತಮ್ಮನ್ನು ತಡೆದವು, ಒಬ್ಬ ಅಭ್ಯರ್ಥಿಯಾಗಿ ತಮಗೆ ಸ್ಟ್ರಾಂಗ್ ರೂಮ್‌ವರೆಗೆ ಹೋಗುವ ಕಾನೂನಾತ್ಮಕ ಹಕ್ಕಿದೆ ಎಂದು ಪ್ರತಿಪಾದಿಸಿ ಒಳಗೆ ಪ್ರವೇಶಿಸಿರುವುದಾಗಿ ದೀದಿ ತಿಳಿಸಿದರು.
ಪಿತೂರಿಯ ಆರೋಪ ಮತ್ತು ಟಿಎಂಸಿ ಆಕ್ರೋಶ
ಮತ ಎಣಿಕೆಗೂ ಮುನ್ನ ಬಿಜೆಪಿ ಮತ್ತು ಚುನಾವಣಾ ಆಯೋಗ ಕೈಜೋಡಿಸಿ ಅಕ್ರಮ ಎಸಗುತ್ತಿವೆ ಎಂದು ತೃಣಮೂಲ ಕಾಂಗ್ರೆಸ್ (TMC) ಗಂಭೀರ ಆರೋಪ ಮಾಡಿದ್ದು, ಅಧಿಕೃತ ಪ್ರತಿನಿಧಿಗಳಿಲ್ಲದೆ ಮತಪೆಟ್ಟಿಗೆಗಳನ್ನು ತೆರೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಚುನಾವಣಾ ದುಷ್ಕೃತ್ಯ ಎಂದು ಪಕ್ಷ ದೂರಿದೆ. ತನ್ನ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಏಕಪಕ್ಷೀಯವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ.

ಒಂದು ಕರೆ ನೀಡಿದರೆ ಹತ್ತು ಸಾವಿರ ಜನ ಬರ್ತಾರೆ!...

ತನ್ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿರುವ ಟಿಎಂಸಿ, ನಮ್ಮ ನಾಯಕಿ ಒಂದು ಕರೆ ನೀಡಿದರೆ ನಿಮಿಷಗಳಲ್ಲಿ ಹತ್ತು ಸಾವಿರ ಜನರು ಜಮಾಯಿಸುತ್ತಾರೆ. ಆದರೆ ನಾವು ಕಾನೂನಿಗೆ ಗೌರವ ನೀಡಿ ಶಾಂತಿ ಕಾಪಾಡುತ್ತಿದ್ದೇವೆ. ಇವಿಎಂ ಮುಟ್ಟಲು ಪ್ರಯತ್ನಿಸಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಅಲ್ಲದೆ, ಬಿಜೆಪಿ ಹರಡುತ್ತಿರುವ ಎಕ್ಸಿಟ್ ಪೋಲ್ ಅಂಕಿಅಂಶಗಳು ಕೇವಲ ಮಾನಸಿಕ ಯುದ್ಧದ ಭಾಗವಾಗಿದ್ದು, ಕಾರ್ಯಕರ್ತರ ಧೈರ್ಯ ಕುಗ್ಗಿಸಲು ನಡೆಸುತ್ತಿರುವ ತಂತ್ರ ಎಂದು ಟಿಎಂಸಿ ಟೀಕಿಸಿದೆ.
ಮೇ 4 ರಂದು ನಡೆಯಲಿರುವ ಮತ ಎಣಿಕೆಯ ದಿನದವರೆಗೆ ಸ್ಟ್ರಾಂಗ್ ರೂಮ್‌ಗಳ ಬಳಿ ಹಗಲು-ರಾತ್ರಿ ಕಾವಲು ಕಾಯುವಂತೆ ಮಮತಾ ಬ್ಯಾನರ್ಜಿ ತನ್ನ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಯಂತ್ರಗಳನ್ನು ಎಣಿಕೆ ಕೇಂದ್ರಗಳಿಗೆ ಸ್ಥಳಾಂತರಿಸುವ ಸಮಯದಲ್ಲಿ ಅವುಗಳನ್ನು ಬದಲಿಸುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿರುವ ದೀದಿ, ಈ ಬಗ್ಗೆ ತೀವ್ರ ನಿಗಾ ಇಡುವಂತೆ ಅಭ್ಯರ್ಥಿಗಳಿಗೆ ಮತ್ತು ಏಜೆಂಟರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲೂ ಎಕ್ಸಿಟ್ ಪೋಲ್‌ಗಳು ಸುಳ್ಳಾಗಿದ್ದವು, ಈ ಬಾರಿಯೂ ತೃಣಮೂಲ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಜಯಗಳಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಭೇಟಿಗೆ ಸಿಗಲಿಲ್ಲ ಅವಕಾಶ...

ಇದೇ ಸಮಯದಲ್ಲಿ ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಮುಖ್ಯಮಂತ್ರಿಯನ್ನು ಭೇಟಿಯಾಗಲು ಸ್ಥಳಕ್ಕೆ ಆಗಮಿಸಿದರಾದರೂ, ಸಿಎಂ ಅದಾಗಲೇ ಚುನಾವಣಾ ಏಜೆಂಟ್ ಜೊತೆಗೆ ಭದ್ರತಾ ಕೊಠಡಿಯೊಳಗೆ ಇದ್ದ ಕಾರಣ ಹಕೀಮ್​​ಗೆ ದೀದಿ ಭೇಟಿಯ ಅವಕಾಶ ಸಿಗಲಿಲ್ಲ. ಇತ್ತ ಖುದಿರಾಮ್ ಅನುಶೀಲನ್ ಕೇಂದ್ರದ ಹೊರಗೆ ಟಿಎಂಸಿ ನಾಯಕರಾದ ಕುನಾಲ್ ಘೋಷ್ ಮತ್ತು ಶಶಿ ಪಂಜಾ ಧರಣಿ ನಡೆಸಿದರು. ಸ್ಟ್ರಾಂಗ್ ರೂಮ್‌ಗಳನ್ನು ತೆರೆಯುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಮತ್ತು ತಮಗೆ ಸರಿಯಾದ ಮಾಹಿತಿ ನೀಡದೆ ಕಾರ್ಯವಿಧಾನದ ಲೋಪ ಎಸಗಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರತಿಭಟನೆಯ ಸಂದರ್ಭದಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು ಎಂದು ವರದಿಯಾಗಿದೆ.

ಎಕ್ಸಿಟ್​ ಪೋಲ್​; ಬದಲಾವಣೆಯ ಗಾಳಿ ಇದೆ ಎಂದ ಸಮೀಕ್ಷೆಗಳು

ರಾಜ್ಯದಲ್ಲಿ ಈ ಬಾರಿ ಬಹುದೊಡ್ಡ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿದ್ದು, ಕನಿಷ್ಠ ಐದು ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವು ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಇದು ರಾಜ್ಯ ರಾಜಕೀಯ ಚಿತ್ರಣವನ್ನೇ ಬದಲಿಸುವ ಮುನ್ಸೂಚನೆ ನೀಡಿದೆ. ಒಂದು ವೇಳೆ ಈ ಸಮೀಕ್ಷೆಗಳ ಲೆಕ್ಕಾಚಾರ ನಿಜವಾದರೆ, ಬಂಗಾಳದಲ್ಲಿ ದಶಕಗಳ ಕಾಲದ ಮಮತಾ ಬ್ಯಾನರ್ಜಿ ಭದ್ರಕೋಟೆ ಕೈ ತಪ್ಪಲಿದ್ದು, ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ ಶೇಕಡಾ 90ಕ್ಕೂ ಹೆಚ್ಚು ಮತದಾನ ದಾಖಲಾಗಿರುವುದು ದೇಶದ ಜನರ ಕುತೂಹಲ ಹೆಚ್ಚಿಸಿದೆ.
ಅನೇಕ ಸಮೀಕ್ಷೆಗಳು ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇರಲಿದೆ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವು ಮಮತಾ ಬ್ಯಾನರ್ಜಿ ಅವರೇ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ಹೇಳುತ್ತಿವೆ. ಈ ಎಲ್ಲಾ ಊಹಾಪೋಹಗಳಿಗೆ ಮತ್ತು ಕುತೂಹಲಕ್ಕೆ ಮೇ 4 ರಂದು ನಡೆಯಲಿರುವ ಅಂತಿಮ ಮತ ಎಣಿಕೆಯ ದಿನದಂದು ತೆರೆ ಬೀಳಲಿದೆ(ಏಜೆನ್ಸೀಸ್​​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net